
ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಜಂಟಿ ಆಶ್ರಯದಲ್ಲಿ ಓದಿನ ಹಸಿವು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ವಿಕ ಮನಿ ಪ್ರೋತ್ಸಾಹಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅವರು ಮಾತನಾಡಿ, ಓದು ಬದುಕಿನ ಪರಿವರ್ತನೆಗೆ ಕಾರಣವಾಗುತ್ತದೆ. ವಿಕ ಬಳಗದ ವಿಕ ಮನಿ ವಾರಪತ್ರಿಕೆಯನ್ನು ಕಾಲೇಜಿನ ವಿದ್ಯಾರ್ಥಿಗಳು ನಿಯಮಿತವಾಗಿ ಓದುವಂತೆ ಮಾಡಿದ ದಾನಿಗಳ ಚಿಂತನೆ ಇತರರಿಗೆ ಮಾದರಿಯಾಗಿದೆ. ಆಧುನಿಕತೆಯಲ್ಲಿ ಕಳೆದುಹೋಗುತ್ತಿರುವ ನಮ್ಮತನ ಉಳಿಯಬೇಕಾದರೆ ಯುವಜನರು ಓದಿನತ್ತ ಗಮನಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ವಿಕ ಮನಿ ಹಣಕಾಸಿನ ಪತ್ರಿಕೆಯಾಗಿದ್ದರೂ ಜೀವನ ಮೌಲ್ಯ ರೂಪಿಸುವ ಅನೇಕ ಕಥಾನಕ ಹೊಂದಿರುವ ಅನುಪಮ ಪತ್ರಿಕೆಯಾಗಿದೆ. ಕಾಲೇಜಿನ 300 ವಿದ್ಯಾರ್ಥಿಗಳು ನಿಯಮಿತವಾಗಿ ಇದನ್ನು ಓದುವಂತೆ ಮಾಡಿರುವ ವಿದ್ಯಾಭಿಮಾನಿಗಳ ಪ್ರೋತ್ಸಾಹ ಅಭಿನಂದನಾರ್ಹ ಎಂದರು.
ಈ ಸಂದರ್ಭ ವಿಜಯ ಕರ್ನಾಟಕ ದಿನಪತ್ರಿಕೆಯ ಹಿರಿಯ ವರದಿಗಾರ ಜಾನ್ ಡಿಸೋಜ, ವಿಕ ಮನಿ ಸಹಾಯಕ ಪ್ರಸರಣಾಧಿಕಾರಿ ರೋಹಿತ್ ನಾಯ್ಕ್ ಉಪಸ್ಥಿತರಿದ್ದರು
ವಿಕ ಮನಿ ಪ್ರೋತ್ಸಾಹಕರಾದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ್, ಲೆಕ್ಕಪರಿಶೋಧಕ ರಾಮಕೃಷ್ಣ ಐತಾಳ್, ನಕ್ಷತ್ರ ಜುವೆಲರ್ಸ್ ಮಾಲಿಕ ನವೀನ್ ಹೆಗ್ಡೆ, ಕೆನರಾ ಕಿಡ್ಸ್ ವಿದ್ಯಾಸಂಸ್ಥೆಯ ಸಂಸ್ಥಾಪಕಿ ವಿನಂತಿ ಎಸ್. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸುಕುಮಾರ್ ಶೆಟ್ಟಿ ವಂದಿಸಿ, ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಅಭಿಷೇಕ್ ಕುಲಾಲ್ ಪ್ರಾರ್ಥಿಸಿದರು.