
ಉಡುಪಿ(ಮಾ 16) :
“ಯಕ್ಷಗಾನದಿಂದ ನಮ್ಮಲ್ಲಿ ಸಂಸ್ಕಾರ ರೂಪುಗೊಳ್ಳುತ್ತದೆ. ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ. ಕಲೆಯನ್ನು ಆರಾಧಿಸುತ್ತಾ ಪಾರಂಪರಿಕ ಕಲೆಯನ್ನು ಕಟ್ಟಿಕೊಟ್ಟ ಹಿರಿಯ ಕಲಾವಿದರು ಸದಾ ಸ್ಮರಣೀಯರು. ವಿದ್ಯಾವಂತರ ಪ್ರವೇಶದಿಂದ ಯಕ್ಷಗಾನ ಬೆಳೆದಿದೆ. ಇನ್ನಷ್ಟು ಬೆಳೆಯಬೇಕಾಗಿದೆ. ಬದಲಾವಣೆ ಆರೋಗ್ಯಕರವಾಗಿಬೇಕು. ಯಕ್ಷಗಾನೀಯ ಚೌಕಟ್ಟಿನೊಳಗಿರಬೇಕು. ಆರಾಧನ ಕಲೆಯೊಳಗೆ ಸಿನೆಮಾ, ರಾಜಕೀಯದ ವಿಚಾರ ಸಲ್ಲದು. ಸರಕಾರದ ಅನುದಾನವನ್ನು ಅರ್ಥಪೂರ್ಣವಾಗಿ ವಿನಿಯೋಗಿಸುವಲ್ಲಿ ಯಕ್ಷಗಾನ ಅಕಾಡೆಮಿ ಬದ್ಧವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಆಯೋಜಿಸಿದ ಮಕ್ಕಳ ಯಕ್ಷಗಾನ ರಂಗಭೂಮಿಯ ಕುರಿತಾದ ಗೋಷ್ಠಿ ಸಕಾಲಿಕವಾಗಿದೆ” ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಯಕ್ಷಗಾನವನ್ನು ಪ್ರಥಮ ವಿದೇಶಕ್ಕೊಯ್ದ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮದದಲ್ಲಿ ‘ಸುವರ್ಣ ಪರ್ವ- ೮’ ರ ಅಂಗವಾಗಿ ಉಡುಪಿಯ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ‘ಮಕ್ಕಳ ಯಕ್ಷಗಾನ ರಂಗ ಭೂಮಿ’ ಎಂಬ ಶೀರ್ಷಿಕೆಯಡಿಯಲ್ಲಿ ಮಾರ್ಚ್ ೧೬, ಆದಿತ್ಯವಾರದಂದು ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ವಿಚಾರ ಗೋಷ್ಠಿ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ಎಂ ರಾವ್. ಅಧ್ಯಕ್ಷತೆವಹಿಸಿದ್ದರು. ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಷಿ ಪ್ರಧಾನ ದಿಕ್ಸೂಚಿ ಭಾಷಣ ಮಾಡಿದರು. ಉಡುಪಿಯ ಯಾಕ್ಸೆಸ್ ಓನ್ ಮೊಬೈಲ್ ಎಸೆಸರಿಸ್ ಎಕ್ಸಪರ್ಟ್ನ ಆಡಳಿತ ಪಾಲುದಾರ ಲಯನ್ ಸುರೇಶ್ ಪ್ರಭು, ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಭುವನ ಪ್ರಸಾದ ಹೆಗ್ಡೆ, ಉಡುಪಿಯ ಐಡಿಯಲ್ ಮೆಡಿಕಲ್ ಸಪ್ಲೆöÊಸ್‌ನ ಪ್ರವರ್ತಕರಾದ ಲಯನ್ ವಿ.ಜಿ. ಶೆಟ್ಟಿ ಮುಖ್ಯ ಅಭ್ಯಾಗತರಾಗಿದ್ದರು.. ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ ಉಪಸ್ಥಿತರಿದ್ದರು.
ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಬಿ. ಕೇಶವ ಬಡಾನಿಡಿಯೂರು ಅವರನ್ನು ಸುವರ್ಣಪರ್ವ ಗೌರವದೊಂದಿಗೆ ಪುರಸ್ಕರಿಸಲಾಯಿತು.
ಯಕ್ಷಗಾನ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ಅವರ ಅಧ್ಯಕ್ಷತೆಯಲ್ಲಿ ‘ಮಕ್ಕಳ ಯಕ್ಷಗಾನ-ಪ್ರಸಂಗ ಸಾಹಿತ್ಯ’ ಎಂಬ ವಿಚಾರದಲ್ಲಿ ಯಕ್ಷ ಸಾಹಿತಿ ಪ್ರೊ.ಶ್ರೀಧರ ಡಿ ಡಿಸ್., ‘ಮಕ್ಕಳ ಯಕ್ಷಗಾನ ತರಬೇತಿಯ ಸವಾಲುಗಳು’ ಎಂಬ ವಿಚಾರದಲ್ಲಿ ಯಕ್ಷ ಗುರು ಪ್ರಸಾದ ಕುಮಾರ ಮೊಗೆಬೆಟ್ಟು, ‘ಮಕ್ಕಳ ಯಕ್ಷಗಾನ ರಂಗ ಪ್ರಸ್ತುತತೆ’ ಎಂಬ ವಿಚಾರದಲ್ಲಿ ಬ್ರಹ್ಮಾವರದ ರಂಗಕರ್ಮಿ ಅಭಿಲಾಷ ಎಸ್. ವಿಚಾರ ಮಂಡಿಸಿದರು. ಯಕ್ಷ ಗುರು ದೇವದಾಸ ರಾವ್ ಕೂಡ್ಲಿ, ಪತ್ರಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಗೋಷ್ಠಿಯ ವಿಚಾರಗಳಿಗೆ ಪ್ರತಿಸ್ಪಂದನ ನೀಡಿದರು.
ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಶಿಕ್ಷಕಿ ವಿನಿತ ಎಸ್. ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ದುರ್ಗಾ ಮಕ್ಕಳ ಮೇಳ (ರಿ) ಕಟೀಲು ಇವರಿಂದ ರಾಜೇಶ್ ಕಟೀಲು ಅವರ ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.