12ರ ವಯಸ್ಸದು ಸರಕಾರಿ ಶಾಲೆಯಲ್ಲಿ ಆರಂಭದ ಜೀವನ, ಬೆಳಿಗ್ಗೆ ಎದ್ದು ಹೇಗೋ ಶಾಲೆಗೆ ಹೋಗಲು ತಯಾರಿ ಮಾಡಿ ಹೊರಡುವುದು. ಬಸ್ಸು ಒಂದು ನಿಲ್ದಾಣ ಬಂದ ಹಾಗೆ ಹಾರ್ನ್ ಹೊಡೆಯುತ್ತದೆ ಅಲ್ಲವೆ ಹಾಗೆ ನಮ್ಮದು ಒಂದು ಹಾರ್ನ್ ಬೆಲ್ ಕೊನೆ ತುದಿಯಲ್ಲಿ ಇರುವ ಮನೆಯ ಸ್ನೇಹಿತರು ಹಾರ್ನ್ ನ ಶಬ್ಧದಂತೆ ವಿಸಿಲ್ ಹೊಡೆಯುತ್ತಾ ಬಂದರೆ ಪ್ರತಿ ಸ್ನೇಹಿತರು ಜೊತೆಯಾಗಿ ಕೊನೆಯಲ್ಲಿ 20ಕ್ಕೂ ಅಧಿಕ ಮಕ್ಕಳು ಜೊತೆಯಾಗಿ ಶಾಲೆ ಸೇರುತ್ತಿದ್ದೆವು, ನಿಮಿಷಗಳ ಪಯಣ ಗಂಟೆಗೆ ಜಾರಿದ್ದು ಉಂಟು. ಮಳೆಗಾಲ ಬಂತೆಂದರೆ ಸಾಕು ಹಳ್ಳ ಕೊಳ್ಳಗಳ ಜೊತೆಗೆ ಗದ್ದೆಯಲ್ಲಿ ನಡೆದು ಸಾಗುವ ದಾರಿಯಲಿ ಕೆಸರಿನೊಂದಿಗೆ ನಮ್ಮ ಆಟ, ಒಬ್ಬರಿಗೊಬ್ಬರು ನೀರನ್ನು ಸಿಂಪಡಿಸುವುದು, ಕೆಸರು ಎರಚುವುದು,ಅದರಲ್ಲೂ ಕೆಲವೊಮ್ಮೆ ಬಿದ್ದಾಗ ಕಾಳಜಿ ಮಾಡುವುದು ಇನ್ನು ಕಣ್ಣ ಮುಂದೆ ಹಾದು ಹೋದಂತಿದೆ. ಜಾತಿ ಅರಿತಿಲ್ಲ…! ಲಿಂಗ ತಿಳಿದೆ ಇಲ್ಲ…! ಸಂತೋಷಕ್ಕೆ ಪಾರವೇ ಇಲ್ಲ. ಪಾರದರ್ಶಕದಂತೆ ಎಲ್ಲೆಂದರಲ್ಲಿ ಓಡಾಡಿಕೊಂಡು ಚೆಲ್ಲಾಪಿಲ್ಲಿ ಆಗಿ ಬದುಕುತಿದ್ದೆವು. ನಡೆದದಂತೂ ನೆನಪೆ ಇಲ್ಲ, ಓಡಿದ್ದೆ ನೆನಪು. ಜೀವನದ ಸುಂದರ ಕ್ಷಣವದು ಬಾಲ್ಯದ ನೋಟ.
